ಸಂಶೋಧಕರು
ಚೆನ್ನಪ್ಪ ಉತ್ತಂಗಿ, 1881-1962

ರೆವರೆಂಡ್ ಚೆನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು, ಸರ್ವಜ್ಞನ ವಚನಗಳ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗಳ ಕ್ಷೇತ್ರದಲ್ಲಿ ಮಾಡಿದ ಬಿಡುವಿಲ್ಲದ ದುಡಿಮೆಗಾಗಿ. ಕರ್ನಾಟಕದ ಜನಸಾಮಾನ್ಯರಲ್ಲಿ ಪ್ರಸಿದ್ದರಾಗಿದ್ದಾರೆ, ಹದಿನಾರನೆಯ ಶತಮಾನದಲ್ಲಿ, ಸರ್ವಜ್ಞನು ರಚಿಸಿದ ತ್ರಿಪದಿಗಳು ಇಂದಿಗೂ ಕನ್ನಡಭಾಷೆಯ ನುಡಿಗಟ್ಟಿನ ಭಾಗವಾಗಿವೆ. ಚೆನ್ನಪ್ಪನವರ ವಿದ್ವತ್ತು ಮತ್ತು ಸಾಧನೆಗಳು ಕೇವಲ ಸರ್ವಜ್ಞನಿಗೆ ಸೀಮಿತವಾಗದೆ ಇತರ ವಲಯಗಳಲ್ಲಿಯೂ ಹರಡಿಕೊಂಡಿವೆ.

ಚೆನ್ನಪ್ಪನವರ ಪೂರ್ವಿಕರು, ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಉತ್ತಂಗಿ ಎಂಬ ಹಳ್ಳಿಯವರು. ಯಾವುದೋ ಒಂದು ಹಂತದಲ್ಲಿ, ಅವರು ವೀರಶೈವ ಧರ್ಮದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡು, ಧಾರವಾಡದಲ್ಲಿ ನೆಲೆಸಿದರು. ಚೆನ್ನಪ್ಪನವರು, ಶಾಲಾಹಂತದಿಂದ ಮುಂದೆ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಅವರು, ಕ್ರೈಸ್ತ ಧರ್ಮಶಾಸ್ತ್ರವನ್ನು (ಕ್ರಿಶ್ಚಿಯನ್ ಥಿಯಾಲಜಿ) ಅಭ್ಯಾಸಮಾಡಲು, ಮಂಗಳೂರಿಗೆ ತೆರಳಿದರು. ಚೆನ್ನಪ್ಪನವರು 1908 ರಲ್ಲಿ, ಉಪದೇಶಕರಾಗಿ (ಎವಾಂಜೆಲಿಸ್ಟ್) ಆಗಿ ನೇಮಕಾತಿ ಪಡೆದರು. ಅನಂತರ, ಗದಗ್, ಧಾರವಾಡ, ಹಾವೇರಿ, ಹುಬ್ಬಳ್ಳಿ ಮುಂತಾದ ಊರುಗಳಲ್ಲಿ ಸೇವೆ ಸಲ್ಲಿಸಿದರು. ಅವರು, 1942 ರಲ್ಲಿ ಸೇವೆಯಿಂದ ನಿವೃತ್ತರಾದರು. ಉತ್ತಂಗಿಯವರು, ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರಗಳೆರಡರಲ್ಲೂ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಇದರ ಪರಿಣಾಮವಾಗಿ, ಅವರು ಪಾಶ್ಚಾತ್ಯ ಮತ್ತು ಭಾರತೀಯ ತತ್ವಶಾಸ್ತ್ರಗಳ ತೌಲನಿಕ ಅಧ್ಯಯನದಲ್ಲಿ ತೊಡಗಿಕೊಂಡರು.

ಚೆನ್ನಪ್ಪನವರು, ಕ್ರಿಶ್ಚಿಯನ್ ಥಿಯಾಲಜಿ, ಭಾರತೀಯ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಸುಮಾರು ಹದಿನೆಂಟು ಪುಸ್ತಕಗಳನ್ನು ಬರೆದಿದ್ದಾರೆ. ಸರ್ವಜ್ಞನ ವಚನಗಳಲ್ಲದೆ ಇನ್ನೂ ಕೆಲವು ಕೃತಿಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅವರ ಮುಖ್ಯವಾದ ಕೃತಿಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.

  1. ಬನಾರಸಕ್ಕೆ ಬೆತ್ಲೆಹೆಮಿನ ವಿನಂತಿ, 1921
  2. ಹಿಂದೂ ಸಮಾಜದ ಹಿತಚಿಂತಕ, 1921
  3. ಮಕ್ಕಳ ಶಿಕ್ಷಣಪಟ, 1923
  4. ನಾರಾಯಣ ವಾಮನ ತಿಲಕ, 1927, ಇಂಗ್ಲಿಷ್ ನಿಂದ ಅನುವಾದ
  5. ದೃಷ್ಟಾಂತದರ್ಪಣ, 1939, ಐವತ್ತು ಪ್ಯಾರಬಲ್ ಗಳ ಅನುವಾದ
  6. ಲಿಂಗಾಯತ ಧರ್ಮ ಮತ್ತು ಕ್ರೈಸ್ತಧರ್ಮ, 1969
  7. ಜಾತೀಯತೆಯ ನಿರ್ಮೂಲನವೋ ರಾಷ್ಟ್ರೀಯ ಭಾವೈಕ್ಯವೋ?’
  8. ಮೃತ್ಯುಂಜಯ, 1963
  9. ‘Heart of Lingayat Religion’
  10. ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ’, 1928, ಧಾರವಾಡ

ಉತ್ತಂಗಿಯವರು ಕ್ರಿಶ್ಚಿಯನ್ ತತ್ವಶಾಸ್ತ್ರ ಮತ್ತು ಭಾರತೀಯ ಕ್ರೈಸ್ತರ ಜೀವನಸಂದರ್ಭವನ್ನು ಕುರಿತು ಗಂಭೀರವಾಗಿ ಆಲೋಚಿಸಿ, ಕೃತಿರಚನೆ ಮಾಡಿದರು. ಸಾಧು ಸುಂದರ್ ಸಿಂಗ್ ಅವರ ಜೀವನಚರಿತ್ರೆಯನ್ನು ನಾಲ್ಕು ಭಾಗಗಳಲ್ಲಿ ಬರೆದ ಉತ್ತಂಗಿಯವರು, ಾ ಸಂತರ ನೀತಿಕಥೆಗಳನ್ನು(ಪ್ಯಾರಬಲ್ಸ್) ಸೂಕ್ತವಾಗಿ ವರ್ಗೀಕರಿಸಿದರು. ಕರ್ನಾಟಕದ ಕ್ರೈಸ್ತರಿಗೆ ನಾರಾಯಣ ವಾಮನ ತಿಲಕರ ಜೀವನವನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ, ವಿನ್ಸ್ಲೋ ಅವರ ಇಂಗ್ಲಿಷ್ ಪುಸ್ತಕವನ್ನು ಅನುವಾದಿಸಿದರು. ಸುಂದರಸಿಂಗ್ ಮತ್ತು ತಿಲಕ್ ಅವರ ಬಗೆಗಿನ ಪುಸ್ತಕಗಳನ್ನು ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ ಪ್ರಕಟಿಸಿತು.

ತಮ್ಮ ಜೀವನದ ಒಂದು ಹಂತದಲ್ಲಿ, ಚೆನ್ನಪ್ಪನವರು ಸರ್ವಜ್ಞನ ವಚನಗಳ(ತ್ರಿಪದಿಗಳು) ಬಗ್ಗೆ ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಂಡರು. ಅವರಿಗೆ ಈ ಕೆಲಸವನ್ನು ಮಾಡಲು ಪ್ರೇರಣೆ ಬಂದಿದ್ದು ನೆಲ್ಸನ್ ಫ್ರೇಜರ್ ಎನ್ನುವ ವಿದ್ವಾಂಸರಿಂದ. ಅವರು ಸರ್ವಜ್ಞನ ವಚನಗಳನ್ನು ಅನುವಾದಿಸಲು ಹಾಗೂ ಅಕ್ಷರಾನುಕ್ರಮಣಿಕೆಯಲ್ಲಿ ಜೋಡಿಸಲು ಪ್ರಯತ್ನ ಪಡುತ್ತಿದ್ದರು. ಉತ್ತಂಗಿಯವರು ಹಸ್ತಪ್ರತಿಗಳ ಸಂಗ್ರಹಕಾರ್ಯದಲ್ಲಿ ತೀವ್ರವಾಗಿ ತೊಡಗಿಕೊಂಡರು. ಧಾರ್ಮಿಕಸಂಸ್ಥೆಗಳು-ಮಠಗಳು, ಪುಸ್ತಕ ಭಂಡಾರಗಳು, ವ್ಯಕ್ತಿಗಳು ಮುಂತಾದ ವಿಭಿನ್ನ ಆಕರಗಳಿಂದ ಓಲೆಗರಿ ಮತ್ತು ಕಾಗದದ ಪ್ರತಿಗಳನ್ನು ಸಂಗ್ರಹಿಸಿದರು. ಈ ಕೆಲಸದಲ್ಲಿ ಮೈಸೂರು ಮತ್ತು ಮದ್ರಾಸುಗಳ ಓರಿಯೆಂಟಲ್ ಲೈಬ್ರರಿಗಳಿಂದ ಬಹಳ ಸಹಾಯವಾಯಿತು. ಆರ್. ನರಸಿಂಹಾಚಾರ್, ಪಂಜೆ ಮಂಗೇಶರಾವ್ ಮುಂತಾದ ವಿದ್ವಾಂಸರು ಸೂಕ್ತವಾದ ಸಲಹೆಗಳನ್ನು ಕೊಟ್ಟರು. ಪ್ರತಿಯೊಂದು ತ್ರಿಪದಿಗೂ ಅನೇಕ ಪಾಠಾಂತರಗಳು ಇರುತ್ತಿದ್ದವು. ಪ್ರಕ್ಷೇಪಗಳಿಗಂತೂ ಲೆಕ್ಕವೇ ಇರಲಿಲ್ಲ. ಈ ತ್ರಿಪದಿಗಳ ಮುದ್ರಿತರೂಪಗಳೂ 1868 ರಷ್ಟು ಹಿಂದಿನಿಂದಲೇ ಪ್ರಚಲಿತವಾಗಿದ್ದವು. (ರೆವರೆಂಡ್ ಜಿ. ವುರ್ತ್ ಅವರ ಆವೃತ್ತಿ) 1920 ರಲ್ಲಿ ನೀತಿಸಾರವೆಂಬ ಹೆಸರಿನಲ್ಲಿ ಅನೇಕ ವಚನಗಳು ಪ್ರಕಟವಾಗಿದ್ದವು. ಚೆನ್ನಪ್ಪನವರು 1928 ವಚನಗಳನ್ನು ಒಳಗೊಂಡ ತನ್ನ ಆವೃತ್ತಿಯನ್ನು 1924 ರಲ್ಲಿ ಪ್ರಕಟಿಸಿದರು.ಅನಂತರ ಅದರ ಅನೇಕ ಆವೃತ್ತಿಗಳು ಬೇರೆ ಬೇರೆ ರೂಪಗಳಲ್ಲಿ ಹೊರಬಂದಿವೆ. ಕಿಸೆ ಆವೃತ್ತಿ(ಪಾಕೆಟ್ ಬುಕ್) ಮತ್ತು ಸಂಗ್ರಹಿತ ಆವೃತ್ತಿಗಳು ಅವುಗಳಲ್ಲಿ ಕೆಲವು. ಅವರು ಈ ವಚನಗಳನ್ನು ಆಧ್ಯಾತ್ಮಿಕ, ನೈತಿಕ ಮತ್ತು ಲೌಕಿಕಗಳೆಂಬ ಮೂರು ಗುಂಪಗಳಲ್ಲಿ ವಿಂಗಡಿಸಿದ್ದಾರೆ. ಅವುಗಳನ್ನು ಮತ್ತೆ 32 ಪದ್ಧತಿಗಳೆಂದು ವರ್ಗೀಕರಿಸಿದ್ದಾರೆ. ಇದಕ್ಕೆ ವಚನಗಳ ಆಶಯವೇ ಆಧಾರ.

ರೆವರೆಂಡ್ ಚೆನ್ನಪ್ಪನವರು ಸರ್ವಜ್ಞನ ವಚನಗಳಲ್ಲದೆ ಬೇರೆ ಕೆಲವು ಕಾವ್ಯಗಳನ್ನೂ ಗ್ರಂಥಸಂಪಾದನೆ ಮಾಡಿದ್ದಾರೆ. ಅವುಗಳ ವಿವರಗಳು ಹೀಗಿವೆ:

  1. ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯವರ ವಚನಗಳು, 1950
  2. ಆದಯ್ಯನ ವಚನಗಳು, 1957
  3. ಸಿದ್ಧರಾಮ ಸಾಹಿತ್ಯ ಸಂಗ್ರಹ, 1955

ರೆವರೆಂಡ್ ಉತ್ತಂಗಿ ಚೆನ್ನಪ್ಪನವರು, 1962 ರಲ್ಲಿ, ಗುಲ್ಬರ್ಗದಲ್ಲಿ ನಡೆದ, 32 ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎಸ್. ಆರ್. ಗುಂಜಾಳ್ ಅವರು ಚೆನ್ನಪ್ಪನವರ ಜೀವನ ಮತ್ತು ಕೃತಿಗಳನ್ನು ಸಂಶೋಧನೆ ಮಾಡಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ತನ್ನನ್ನು ತಿರುಳ್ಗನ್ನಡದ ತಿರುಕ ಎಂದು ಕರೆದುಕೊಂಡ ವಿನಯಶೀಲರಾದ ಉತ್ತಂಗಿಯವರು ಮಹತ್ವದ ಕೆಲಸ ಮಾಡಿದ್ದಾರೆ.

 

ಮುಂದಿನ ಓದು ಮತ್ತು ಲಿಂಕುಗಳು:

    1. ಚೆನ್ನಪ್ಪ ಉತ್ತಂಗಿ, ಸದಾಶಿವ ಒಡೆಯರ್, ಧಾರವಾಡ.
    2. [PDF]187-190 Beaman , (Lessons from India, The Contextual Chrstian: Chennappa D. Uttangi by Brad Beaman)

ಮುಖಪುಟ / ಸಂಶೋಧಕರು